ನಕ್ಷತ್ರ ಮೀನು -
ಆಸ್ಟೆರಾಯ್ಡಿಯ ವರ್ಗಕ್ಕೆ ಸೇರಿದ ಹಲವಾರು ಬಗೆಯ ಸಾಗರವಾಸಿ ಕಂಟಕಚರ್ಮಿಗಳ ಸಾಮಾನ್ಯ ಹೆಸರು (ಸ್ಟಾರ್‍ಫಿಶ್). ಈ ಮೀನುಗಳು ಸಮುದ್ರದಲ್ಲಿ ಮರಳುಕಲ್ಲಿರುವ ಪ್ರದೇಶಗಳಲ್ಲಿ ಅಡಗಿ ಜೀವಿಸುತ್ತವೆ. ಪ್ರೌಡಜೀವಿಯ ದೇಹಕ್ಕೆ ಚಪ್ಪಟೆ ನಕ್ಷತ್ರಾಕಾರವಿದೆ. ದೇಹದ ಮಧ್ಯಭಾಗ ಚಪ್ಪಟೆಯಾಗಿದ್ದು ಅದರಿಂದ ಸುತ್ತ ಕಿರಣಗಳಂತೆ ಹರಡಿರುವ ಐದು ತೋಳುಗಳು ಇರುವುವು. ಇವು ಬುಡದಲ್ಲಿ ಅಗಲವಾಗಿದ್ದು ಕ್ರಮೇಣ ತುದಿಯ ಕಡೆಗೆ ಕಿರಿದಾಗಿರುವುವು. ಸಾಧಾರಣವಾಗಿ ತೋಳುಗಳು ಚಪ್ಪಟೆಯಾಗಿಯೂ ಒಂದೇ ಸಮವಾಗಿಯೂ ಇರುತ್ತವೆ. ಕೆಲವು ಪ್ರಭೇದಗಳಲ್ಲಿ 6, 7, 8 ಅಥವಾ ಹೆಚ್ಚಿನ ಸಂಖ್ಯೆಯ ತೋಳುಗಳಿರುವುದುಂಟು. ಆದರೆ ಈ ಸಂಖ್ಯೆ ನಲವತ್ತನ್ನು ಮೀರುವುದಿಲ್ಲ. ಆಸ್‍ಟೇರಿಯಸ್‍ನಲ್ಲಿರುವಂತೆ ತೋಳುಗಳು ಉದ್ದವಾಗಿರಬಹುದು. ಕೆಲವೊಮ್ಮೆ ದುಂಡಾಗಿರುವುದುಂಟು. ತೋಳುಗಳು ಒಟ್ಟುಗೂಡಿ ದೇಹಾಕಾರ ಪಂಚಕೋನದಂತೆ ಇರಬಹುದು. ಈ ಐದು ಕೋನಗಳೇ ತೋಳುಗಳ ಸಂಖ್ಯೆಯನ್ನು ಸೂಚಿಸುತ್ತವೆ. ಎರಡು ತೋಳುಗಳ ಮಧ್ಯೆ ಇರುವ ಪ್ರದೇಶಕ್ಕೆ ತ್ರಿಜ್ಯಮಧ್ಯಭಾಗ ಎಂದು ಹೆಸರು.  

ಒಂದೊಂದು ತೋಳಿನಲ್ಲಿಯೂ ಪ್ರಾಣಿಯ ಮುಖ್ಯಾಂಗಗಳು ಒಂದೇ ಸಮನಾಗಿ ಹರಡಿರುವುವು. ಈ ಅಂಗಗಳ ಕೇಂದ್ರಭಾಗ ತಟ್ಟೆಯಂತಿರುವ ಮಧ್ಯಭಾಗದಲ್ಲಿರುವುದು. ಸಮುದ್ರದ ಮರಳಿನೊಂದಿಗೆ ಸಂಪರ್ಕವಿರುವ ಭಾಗಕ್ಕೆ ಅಧೋಭಾಗ(ಕಬರಲ್)ವೆಂದೂ ಮೇಲೆ ಕಾಣುವ ಭಾಗಕ್ಕೆ ಊಧ್ರ್ವಭಾಗ(ಅಬೇರಲ್)ವೆಂದೂ ಹೆಸರು. ಅಧೋಭಾಗದ ಮಧ್ಯೆ ಬಾಯಿ ಉಂಟು. ಕಿರಿಅಗಲದ ತೋಡುಗಳು ಬಾಯಿಯಿಂದ ಹೊರಟು ತೋಳುಗಳ ತುದಿಯವರೆಗೆ ವಿಸ್ತರಿಸಿದೆ. ಈ ತೋಡುಗಳಿಗೆ ಆಂಬುಲೇಕ್ರಲ್ ತೋಡುಗಳೆಂದು ಹೆಸರು. ತೋಳಿನ ತುದಿಯಲ್ಲಿ ಒಂದು ಕೆಂಪು ಚುಕ್ಕೆಯಿದೆ. ಈ ಚುಕ್ಕೆ ಬೆಳಕಿಗೆ ಸಂವೇದನಶೀಲವೇ ಎಂಬುದು ಖಚಿತವಾಗಿ ತಿಳಿದಿಲ್ಲ. ತೋಳುಗಳ ತುದಿಯಲ್ಲಿ ತೆಳುವಾದ ಕೋಡುಗಳಿವೆ.

    ಆಂಬುಲೇಕ್ರಲ್ ತೋಡಿನಿಂದ ನಳಿಕೆಪಾದಗಳು (ಟ್ಯೂಬ್‍ಫೀಟ್) ಹೊರಬೀಳುತ್ತವೆ. ಇವು ಪ್ರತಿ ತೋಳಿನಲ್ಲಿಯೂ 2 ರಿಂದ 4 ಸಾಲುಗಳಲ್ಲಿ ಸ್ಥಿತವಾಗಿದೆ. ಹಿಂದುಳಿದ ಬಗೆಯ ನಕ್ಷತ್ರಮೀನುಗಳಲ್ಲಿ ಇವು ಎರಡು ಸಾಲುಗಳಲ್ಲಿವೆ. ಅವುಗಳ ಸಂಖ್ಯೆಯೂ ಕಡಿಮೆ. ಮುಂದುವರಿದ ನಕ್ಷತ್ರಮೀನುಗಳಲ್ಲಿ ನಳಿಕೆಪಾದಗಳ ಸಂಖ್ಯೆ ಹೆಚ್ಚಾಗಿದ್ದು ಇವು ಎರಡು ಸಾಲುಗಳಲ್ಲಿರುವುವು. ನಳಿಕೆಪಾದಗಳು ಸ್ನಾಯುತಂತುಗಳಿಂದ ರಚಿತವಾಗಿವೆ. ಇವುಗಳ ತುದಿಯಲ್ಲಿ ಹೀರುಬಟ್ಟಲುಗಳಿವೆ. ನಳಿಕೆಪಾದಗಳ ಮುಖ್ಯ ಕಾರ್ಯ ಪ್ರಾಣಿಯ ಚಲನೆಯಲ್ಲಿ ನೆರವಾಗುವುದು.

   ಊಧ್ರ್ವಭಾಗದ ಮಧ್ಯಬಿಂದುವಿನ ಒಂದು ಪಕ್ಕಕ್ಕೆ ಆಸನದ್ವಾರವುಂಟು. ಕೆಲವು ಬಗೆಯ ನಕ್ಷತ್ರಮೀನುಗಳಲ್ಲಿ ಆಸನದ್ವಾರ ಇರುವುದೇ ಇಲ್ಲ. ಯಾವುದೇ ಎರಡು ತೋಳುಗಳು ಸಂಧಿಸುವ ಪ್ರದೇಶದಲ್ಲಿ ಮ್ಯಾಡ್ರಿಪೊರೈಟ್ ತಟ್ಟೆಯಿದೆ. ಇದರ ಆಕಾರ ಚಕ್ರದಂತೆ. ಇದರಲ್ಲಿ ಸಾಕಷ್ಟು ತೋಡುಗಳೂ ರಂಧ್ರಗಳೂ ಇವೆ. ಗತವಂಶಿಗಳಾದ ಕೆಲವು ನಕ್ಷತ್ರಮೀನುಗಳಲ್ಲಿ ಮ್ಯಾಡ್ರಿಪೊರೈಟ್ ಅಧೋಭಾಗದಲ್ಲಿದೆ. ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಮ್ಯಾಡ್ರಿಪೊರೈಟ್ ತಟ್ಟೆಗಳುಳ್ಳ ನಕ್ಷತ್ರಮೀನುಗಳೂ ಇಲ್ಲದಿಲ್ಲ.

    ನಕ್ಷತ್ರಮೀನುಗಳ ಚರ್ಮದಲ್ಲಿ ಸುಣ್ಣದ ಸಣ್ಣ ಫಲಕಗಳು ಹುದುಗಿಕೊಂಡಿರುವುವು. ಇವುಗಳಿಂದ ಚರ್ಮಕ್ಕೆ ದೃಢತೆ ಲಭಿಸಿದೆ. ಸ್ನಾಯುಪಟ್ಟಿಗಳ ನೆರವಿನಿಂದ ಒಂದಕ್ಕೊಂದು ಕೂಡಿಕೊಂಡಿವೆ. ಜೀವಂತ ನಕ್ಷತ್ರಮೀನುಗಳಲ್ಲಿ ದೇಹ ಗಡುಸಾಗಿದ್ದರೂ ತೋಳುಗಳು ನಮ್ಯವಾಗಿವೆಯಲ್ಲದೆ ಅವಕ್ಕೆ ಅಲುಗಾಡುವ ಶಕ್ತಿಯೂ ಉಂಟು. ಆಂಬುಲೇಕ್ರಲ್ ತೋಡಿನ ಇಕ್ಕೆಡೆಗಳಲ್ಲಿ ಆಂಬುಲೇಕ್ರಲ್ ಫಲಕಗಳುಂಟು. ಇವಕ್ಕೆ ಕೀಲುಸಂದುಗಳ ರೀತಿಯಲ್ಲಿ ಚಲಿಸುವ ಸಾಮಥ್ರ್ಯವುಂಟು. ಈ ಫಲಕಗಳಿಗೆ ಅಂಟಿರುವ ಮುಳ್ಳುಗಳು ಒಟ್ಟುಗೂಡಿದರೆ ತೋಡುಗಳು ಮುಚ್ಚಿಕೊಂಡು ಅದರಿಂದ ನಳಿಕೆಪಾದಗಳಿಗೆ ರಕ್ಷಣೆ ಒದಗುತ್ತದೆ. ಊಧ್ರ್ವಭಾಗದಲ್ಲಿ ಫಲಕಗಳ ಮೇಲೆ ಮುಳ್ಳುಗಳಿರುವುದು ಸಾಧಾರಣ. ಕೆಲವು ಸಲ ಅವುಗಳ ಬದಲು ಸಣ್ಣ ಸಣ್ಣ ಗಂಟುಗಳಿರಬಹುದು. ಆಸ್ಟ್ರೊಪೆಕ್ಟನ್ ಎಂಬ ನಕ್ಷತ್ರಮೀನಿನಲ್ಲಿ ಊಧ್ರ್ವಭಾಗದ ಫಲಕಗಳ ಮೇಲೆ ತೆಳುವಾದ ಸಲಾಕೆಗಳಂಥ ರಚನೆಗಳಿರುವುವು. ಇವುಗಳ ತುದಿಯಲ್ಲಿ ತೆಳುವಾದ ಅನೇಕ ಕಡ್ಡಿಗಳಿರುವುವು. ಇವಕ್ಕೆ ಪ್ಯಾಕ್ಸಿಲ್ಲಗಳೆಂದು ಹೆಸರು. ಮುಳ್ಳುಗಳ ನಡುವೆ ಚಿಮುಟದಂತಿರುವ ಪೆಡಿಸಲ್ಲೇರಿಯಗಳೂ, ಡರ್ಮಲ್ ಬ್ರಾಂಕಿಯಗಳೂ ಉಂಟು.

ನಕ್ಷತ್ರಮೀನುಗಳಿಗೆ ಹೊಟ್ಟೆಬಾಕತನ ಹೆಚ್ಚು. ಸಮುದ್ರದಲ್ಲಿ ಜೀವಿಸುವ ಕಪ್ಪೆಚಿಪ್ಪು ಮತ್ತು ಶಂಖಪ್ರಾಣಿಗಳು ಇವುಗಳ ಆಹಾರ. ಜೀರ್ಣವಾಗದ ಗಟ್ಟಿ ಪದಾರ್ಥವನ್ನು ದೇಹದೊಳಗೆ ತೆಗೆದುಕೊಳ್ಳದಿರುವುದು ಇವುಗಳ ಆಹಾರ ಸೇವನೆಯ ವೈಶಿಷ್ಟ್ಯ.

    ಸಾಧಾರಣವಾಗಿ ನಕ್ಷತ್ರಮೀನುಗಳು ಏಕಲಿಂಗಗಳು. ಆದರೆ ಆಸ್ಟರೈನ ಗಿಬ್ಬೋಸ ಎಂಬುದು ದ್ವಿಲಿಂಗಿ. ಇದು ಪ್ರೌಢಾವಸ್ಥೆಗೆ ಬಂದಾಗ ಮೊದಲು ಪುರುಷಾಣುಗಳನ್ನೂ ಅನಂತರ ತತ್ತಿಗಳನ್ನೂ ಉತ್ಪತ್ತಿಮಾಡುತ್ತದೆ. ಸೈನಾಪ್ಟಿಡೀ ಕುಟುಂಬದ ದ್ವಿಲಿಂಗಿ ನಕ್ಷತ್ರಮೀನುಗಳು ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುವುವು; ಇವು ಮೊದಲು ತತ್ತಿಗಳನ್ನು ಉತ್ಪತ್ತಿಮಾಡಿ ಅನಂತರ ಪುರುಷಾಣುಗಳನ್ನು ಉತ್ಪಾದಿಸುವುವು. ನಕ್ಷತ್ರಮೀನುಗಳ ಜೀವನ ಚರಿತ್ರೆಯಲ್ಲಿ ಸಂಯೋಗಿ ಕಣಗಳು ಮೊದಲು ಡಿಂಬಗಳಾಗಿ ಅನಂತರ ರೂಪಪರಿವರ್ತನೆಗೊಂಡು ಪ್ರೌಢಜೀವಿಗಳಾಗುತ್ತವೆ.

    ನಕ್ಷತ್ರಮೀನುಗಳಲ್ಲಿ ಸಂತಾನರಕ್ಷಣೆ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. ಹೆನ್‍ರಿಸಿಯ ಮತ್ತು ಲೆಪ್ಟಾಸ್ಟೀರಿಯಸ್ ಪ್ರಭೇದಗಳು ತಮ್ಮ ಮರಿಗಳನ್ನು ತೋಳಿನಲ್ಲಿ ಇಟ್ಟುಕೊಂಡು ಸಂರಕ್ಷಿಸುತ್ತವೆ. ಟಿರಾಸ್ಟರ್ ಎಂಬುದು ತನ್ನ ಊಧ್ರ್ವಭಾಗದ ಮೇಲಿನ ಚರ್ಮದಲ್ಲಿ ಒಂದು ವಿಧವಾದ ಚೀಲವನ್ನು ರೂಪಿಸಿಕೊಂಡು ಇದರಲ್ಲಿ ಮರಿಯನ್ನು ಬೆಳೆಸುತ್ತದೆ. ಕೆಲವು ಪ್ರಭೇದಗಳಲ್ಲಿ ನೀರಿನಲ್ಲಿ ಈಜಾಡುವ ಡಿಂಬಾವಸ್ಥೆಯಾಗಲೀ ರೂಪಪರಿವರ್ತನೆಯಾಗಲೀ ಕಾಣುಬರುವುದಿಲ್ಲ.

    ನಕ್ಷತ್ರಮೀನುಗಳು ಸಾಧಾರಣ ಇತರ ಯಾವ ಪ್ರಾಣಿಗಳಿಗೂ ಆಹಾರವಲ್ಲ. ಇವುಗಳ ಚಲನೆ ಬಹಳ ನಿಧಾನ. ಸಾಧಾರಣವಾಗಿ ಹೆಚ್ಚು ಆಳವಿಲ್ಲದ ಸ್ಥಳಗಳಲ್ಲಿ ವಾಸಿಸುವುವು. ಬ್ರಿಸಿಂಗ್ ಹೈಮಿನಾಸ್ಟರ್ ಮತ್ತು ಪಾರೆಸೆಲ್ಲ ನಾಸ್ಟರ್‍ಗಳು ಆಳ ಸಮುದ್ರದ ನಿವಾಸಿಗಳು.

    ಪುನರುತ್ಪಾದನಾ ಸಾಮಥ್ರ್ಯ ಈ ಪ್ರಾಣಿಗಳಲ್ಲಿ ಹೆಚ್ಚು. ಕೆಲವು ನಕ್ಷತ್ರ ಮೀನುಗಳಲ್ಲಿ ಸರಾಗವಾಗಿ ಮತ್ತು ಸಾಮಾನ್ಯವಾಗಿ ತೋಳುಗಳು ಮುರಿದು ಕಳಚಿಹೋಗುವುದುಂಟು. ಹೀಗೆ ಮುರಿದುಹೋದ ತೋಳಿನ ತುಂಡುಗಳನ್ನೂ ಕಳೆದುಹೋದ ಇತರ ಭಾಗಗಳನ್ನೂ ಹೊಸ ಬಾಯಿಯನ್ನೂ ಇವು ಅಷ್ಟೇ ಸರಾಗವಾಗಿ ಪುನರ್‍ರಚಿಸಿಕೊಳ್ಳುವುವು. ನಕ್ಷತ್ರಮೀನುಗಳ ಪಳೆಯುಳಿಕೆಗಳು ಸೈಲ್ಯೂರಿಯನ್ ಯುಗದಲ್ಲಿ ದೊರೆತಿವೆ.
(ಸಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ